ಬೆನೆಟ್, ಸ್ಟೀಫನ್ ವಿನ್‍ಸೆಂಟ್
1898-1943. ಅಮೆರಿಕದ ಕವಿ ಕಾದಂಬರಿಕಾರ. ಬೆತ್ಲೆಹೆಮ್‍ನಲ್ಲಿ 1898 ಜುಲೈ 22ರಂದು ಜನಿಸಿದ. ಯೇಲ್ ವಿಶ್ವವಿದ್ಯಾಲಯದಿಂದ 1919ರಲ್ಲಿ ಪದವಿ ಪಡೆದ. 1926ರಲ್ಲಿ ಈತ ಗೂಗನ್ ಹೀಮ್ ಶಿಷ್ಯವೇತನ ಪಡೆದು ಜಾನ್ ಬ್ರೌನ್ಸ್ ಬಾಡಿ ಎಂಬ ಕಥನ ಕಾವ್ಯ (ಬ್ಯಾಲಡ್ ಎಪಿಕ್) ರಚಿಸಿದ (1928). ಅಂದಿನ ಅಂತರ್ಯುದ್ಧ ಈ ಕಾವ್ಯದ ವಸ್ತು. ಬೆನೆಟ್‍ಗೆ ಅಪಾರ ಖ್ಯಾತಿ ತಂದುಕೊಟ್ಟ ಈ ಕೃತಿಗೆ ಪುಲಿಟ್‍ಜûರ್ ಬಹುಮಾನ ಕೂಡ ದೊರಕಿತು (1929). ಪಶ್ಚಿಮದ ಕಡೆಗೆ ವಲಸೆ ಸಾಗುವುದನ್ನು ವಸ್ತುವಾಗುಳ್ಳ ವೆಸ್ಟರ್ನ್ ಸ್ಟಾರ್ ಎಂಬ ಕಾವ್ಯ 1943ರಲ್ಲಿ ಪ್ರಕಟವಾಯಿತು. ಇದು ಕೂಡ ಪುಲಿಟ್‍ಜûರ್ ಪ್ರಶಸ್ತಿಯನ್ನು ಪಡೆಯಿತು. ದಿ ಡೆವಿಲ್ ಅಂಡ್ ಡೇನಿಯಲ್ ವೆಬ್‍ಸ್ಟರ್, ವಿ ಸ್ಟಾಂಡ್ ಯುನೈಟೆಡ್-ಇವು ಈತನ ಇತರ ಕೃತಿಗಳು. ಈತನ ಕೃತಿಗಳ ಆಯ್ದ ಸಂಗ್ರಹ 1942ರಲ್ಲಿ ಹೊರಬಂತು. 1943 ಮಾರ್ಚ್ 13ರಂದು ತೀರಿಕೊಂಡ. 					
(ಎಂ.ಕೆ.ಎನ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ